ಮಾತೃಪೂಜೆ - ಮಾತೃದೇವತೆಯ ಪರಿಭಾವನೆ ಜಗತ್ತಿನಾದ್ಯಂತ ಅನೇಕ ಪರಂಪರೆಗಳಲ್ಲಿ ಕಂಡುಬರುತ್ತದೆ. ಆಕೆ ಫಲಸಮೃದ್ಧಿ ದೇವತೆ, ಶಿಲಾಯುಗದಲ್ಲಿದ್ದ ಏಕದೈವವಾದದಲ್ಲಿ ಫಲಸಮೃದ್ಧಿ ದೇವತೆಯದ ಮಾತೃದೇವತೆಯೇ ಏಕೈಕ ದೈವವಾಗಿದ್ದಳೆಂದೂ ಎಲ್ಲ ಪೂಜೆಯೂ ಆಕೆಗೆ ಸಲ್ಲುತ್ತಿತ್ತೆಂದೂ ವಿದ್ವಾಂಸರು ಪ್ರತಿಪಾದಿಸುತ್ತಾರೆ. ಜಗತ್ತಿನ ಅತಿಪ್ರಾಚೀನ ಉಳಿಕೆಗಳಲ್ಲಿ ಮಾತೃದೇವತೆಯ ವಿಗ್ರಹಗಳು ದೊರೆತಿವೆ.

ಪೂರ್ವಮೆಡಿಟರೇನಿಯನ್ ಪ್ರದೇಶದ ಉತ್ತರ ಹಾಗೂ ದಕ್ಷಿಣದ ದೇಶಗಳು ಮಹಾಮಾತೆಯ ಆರಾಧನಪಂಥದ ಮೂಲನೆಲೆಗಳಾಗಿದ್ದುವು. ಈಜಿಪ್ಟಿನ ಬಲುಪ್ರಾಚೀನ ದೈವವಾದ ಏಪಿಸ್ ಒಬ್ಬ ಸಮೃದ್ಧಿ ದೇವತೆಯಾಗಿದ್ದಳು. ಇವಳಿಗೆ ಸಂವಾದಿಯಾದ ರೋಮನ್ನಿನ ಸೀರ್ಸ್ ಹಾಗೂ ಗ್ರೀಕ್‍ನ ಹೆಮಿಟರ್-ಈ ಮೂವರೂ ಮೆಡಿಟರೇನಿಯನ್ನಿನ ಮೂಲ ಮಾತೃ ದೇವತೆಯ ಸ್ಥಳೀಯ ರೂಪುಗಳು ಅಥವಾ ಪೂರ್ವಪಿತೃರೂಪದ ಪಳೆಯುಳಿಕೆಗಳೆನ್ನಬಹುದು. ಈ ಮಹಾಮಾತೆಯನ್ನು ಉದಾರಸಮೃದ್ಧಿಗೆ ಪ್ರತೀಕವಾದಂಥ ಭೂಮಿಯೊಂದಿಗೆ ಸಮಾನಳು ಎಂದು ಪರಿಭಾವಿಸಿದಾಗ ಆಕೆ ಜಿಯಾ ಅಥವಾ ಜಿ(ಗ್ರೀಕ್) ಅಥವಾ ಟೆಲಸ್ (ರೋಮನ್) ಎಂದು ಹೆಸರು ಪಡೆದುಕೊಂಡಳು. ಜಿಯಾ ಅಥವಾ ಭೂಮಿತಾಯಿ ಪಂಥ ಒಲಂಪಿಯಾ ಹಾಗೂ ಡೆಲ್ಫಿಗಳಲ್ಲಿ ಬಹುವ್ಯಾಪಕವೂ ಪ್ರಬಲವೂ ಆಗಿತ್ತು. ಮಹಾಮಾತೆಯ ಅಂಗಲಕ್ಷಣಗಳನ್ನು ಪ್ರಧಾನವಾಗಿ ಪರಿಭಾವಿಸಿದಾಗ ಆಕೆ ಸಿಬೆಲೆ. ರೀಆ ಸಿಬೆಲೆ, ಅಡಿಸ್ಟಿಸ್ ಅಥವಾ ಡಿಂಡಿಮನೆ-ಹೀಗೆ ವಿವಿಧ ಹೆಸರು ಪಡೆಯುತ್ತಿದ್ದಳು. ಆಕೆಯನ್ನು ಫ್ರೀಜಿಯಾ ಹಾಗೂ ಪಶ್ಚಿಮ ಏಷ್ಯಗಳಲ್ಲಿ ಅನೇಕ ಭಯಂಕರ ವಿಧಿಗಳಿಂದ ಆರಾಧಿಸಲಾಗುತ್ತಿತ್ತು. ಗ್ರೀಸ್‍ನಲ್ಲಿ ಸಿಬೆಲೆಯನ್ನು ರೀಆ ದೇವತೆಯೊಂದಿಗೆ ಸಮೀಕರಿಸಲಾಗಿತ್ತು. ಆಕೆಯ ಆರಾಧನೆ ರೋಮ್ ಪ್ರವೇಶಿಸಿದಾಗ (ಕ್ರಿ.ಪೂ.ಸು.204) ಆಕೆಯನ್ನು ಜೂಪಿಟರ್‍ನ ತಾಯಿ ಒಪ್ಸ್ (ಸಮೃದ್ಧಿ) ದೇವತೆಯೊಂದಿಗೆ ಸಮೀಕರಿಸಲಾಯಿತು. ರೋಮನ್ ಪುರಾಣದ ಪ್ರಕಾರ ಮ್ಯಾಗ್ನಮಾಟರ್‍ಳನ್ನು (ಮಹಾತಾಯಿ) ಮಾತೃದೇವತೆಯೆಂದು ಪರಿಗಣಿಸಲಾಗಿದೆ. ಈ ದೇವತೆಗಳಿಗೆ ಪ್ರಿಯಕರರುಂಟು. ಸಿಬೆಲೆಗೆ ಆಟ್ಟಸ್, ಅಪ್ರೊಡೈಟಿಗೆ ಅಡೋನಿಸ್, ಐಸಿಸ್‍ಗೆ ಇಸಿರಸ್ ಇತ್ಯಾದಿ. ಗ್ರೀಸ್, ಇಟಲಿಗಳಲ್ಲಿ ಈ ದೇವತೆಗಳ ಪೂಜೆ, ಆರಾಧನೆ, ಸಮಾರಂಭ, ಉತ್ಸವಗಳು ಸಕಲ ಸಡಗರದೊಂದಿಗೆ ನಡೆಯುತ್ತಿದ್ದವೆಂದು ತಿಳಿದುಬರುತ್ತದೆ.

ಭಾರತದಲ್ಲಿ ಮಾತೃಪೂಜೆ ತುಂಬ ವ್ಯಾಪಕವಾಗಿದೆ. ಭಾರತೀಯ ಪರಂಪರೆಯಲ್ಲಿ ಮಾತೃದೇವತೆಗೆ ಹೆಚ್ಚಿನ ಸ್ಥಾನ ಲಭ್ಯವಾಗಿದ್ದು ಸಪ್ತಮಾತೃಕೆಯರ ಹೆಸರಿನಲ್ಲಿ, ಶಕ್ತಿ ಭೈರವೀ ಹೆಸರಿನ ತಾಂತ್ರಿಕರ ಶಕ್ತಿಯ ಆರಾಧನೆಗಳಲ್ಲಿ ಈ ಅಂಶವನ್ನು ಗುರುತಿಸಬಹುದಾಗಿದೆ. ತೈತ್ತಿರೀಯ ಉಪನಿಷತ್ತಿನಲ್ಲಿ ಮಾತೃದೇವೋಭವ (ತಾಯಿಯೇ ದೇವರು) ಎಂದು ಹೇಳಿದೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಹೊಂದಿದ್ದ ದ್ರಾವಿಡರಲ್ಲಿ ಮಾತೃಪೂಜೆ ಪ್ರಬಲವಾಗಿತ್ತು. ದಕ್ಷಿಣ ಭಾರತದಲ್ಲಿ ಇಂದಿಗೂ ಗ್ರಾಮದೇವತೆಯನ್ನು ದುರ್ಗೆ, ಮಾರಿ, ಕಾಳಿ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ.
ಸಂಖ್ಯಾದರ್ಶನಕ್ಕನುಗುಣವಾಗಿ ಪ್ರಕೃತಿ ಸ್ವತಂತ್ರ ತತ್ತ್ವವಾಗಿದ್ದು, ಮಹದಾದಿಗಳು ಅದರ ಗರ್ಭದಲ್ಲಿ ಅಡಗಿವೆ. ವಿಶಿಷ್ಟಾದ್ವೈತ ಮತ ಮತ್ತು ದ್ವೈತದರ್ಶನಗಳಲ್ಲಿ ಪ್ರಕೃತಿ ಪರಮಾತ್ಮನ ಅಣತಿಯ ಮೇರೆಗೆ ಭೌತವಿಶ್ವವನ್ನು ಹುಟ್ಟಿಸುತ್ತದೆ. ಅದ್ವೈತದಲ್ಲಿ `ಮಾಯೆಯ ಮುಖಾಂತರ ಬ್ರಹ್ಮತತ್ತ್ವ ಸಾವಿರಾರು ಜೀವಿಗಳ ರೂಪದಲ್ಲಿ ಅಸಂಖ್ಯ ಭೌತವಸ್ತುಗಳಾಗಿ ತೋರುತ್ತದೆ. ಅವೈದಿಕದರ್ಶನಗಳಾದ ಜೈನ ಮತ್ತು ಬೌದ್ಧ ಸಾಹಿತ್ಯದಲ್ಲಿ ಅಬ್ಬೆ, ತಾರಾದೇವಿ-ಇವರುಗಳ ಉಲ್ಲೇಖ ದೊರೆಯುತ್ತದೆ.

ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ನವರಾತ್ರಿಯಲ್ಲಿ ಚಾಮುಂಡಿ, ಲಕ್ಷ್ಮಿಯರ ಪೂಜೆಯನ್ನೂ ಬಂಗಾಲ, ಬಿಹಾರ, ಅಸ್ಸಾಂಗಳಲ್ಲಿ ದುರ್ಗಾಪೂಜೆಯನ್ನೂ ನಡೆಸುವ ಸಂಪ್ರದಾಯವಿದೆ.					
(ಕೆಯುಜಿಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ